Monday, August 3, 2015

ಪ್ರಜಾವಾಣಿಯ 'ಕರ್ನಾಟಕ ದರ್ಶನ'ದಲ್ಲಿ ಪ್ರಕಟವಾದ ಲೇಖನದ ಕುರಿತು ಡಿ.ಎಂ.ಘನಶ್ಯಾಮ ರವರ ಅಭಿಪ್ರಾಯ..




ಹಲಸು ಹೊಸ ಹೊಸತು | ಪ್ರಜಾವಾಣಿ

ಹಲಸು ಹೊಸ ಹೊಸತು | ಪ್ರಜಾವಾಣಿ



‘ಹಲಸು ಯಾರು ಕೀಳ್ತಾರೆ ಸ್ವಾಮಿ. ಮೈ ತುಂಬಾ ಮುಳ್ಳು, ಬಿಡಿಸಲು ಹೋದರೆ ಮೆತ್ತುವ ಬಿಳಿ ಅಂಟು, ನೆಮ್ಮದಿಯಾಗಿ ತಿನ್ನೋಣ ಅಂದ್ರೆ ಪ್ರತಿ ತೊಳೆಯೊಳಗೂ ಬೀಜ. ಮಾರೋ ಮಾತಿರಲಿ, ಬಿಟ್ಟಿ ಕೊಡ್ತೀವಿ ಅಂದ್ರೂ ಯಾರೂ ತಗೊಳೊಲ್ಲಾ...’
ಪ್ರಸಿದ್ಧ ಯಾತ್ರಾಸ್ಥಳ ಸಿದ್ದರಬೆಟ್ಟದ ಬುಡದಲ್ಲಿರುವ ಚಿಕ್ಕವೆಂಕಟದಾಸೇಗೌಡನಪಾಳ್ಯ ಗ್ರಾಮದ ರೈತರಾದ ಚಿಕ್ಕರಂಗಯ್ಯ ವರ್ಷದ ಹಿಂದೆ ಹೇಳಿದ್ದ ಮಾತಿದು. ಅವರ ಮಾತು ಸುಳ್ಳಾಗುವಂಥ ಹಲವು ಬೆಳವಣಿಗೆಗಳು ಇದೀಗ ತುಮಕೂರು ಜಿಲ್ಲೆಯಲ್ಲಿ ಘಟಿಸಿವೆ. ತೋವಿನಕೆರೆಯ ‘ಹಳ್ಳಿಸಿರಿ’ ಸಂಘ ಹಲಸು ಶ್ಯಾವಿಗೆ ತಯಾರಿ ವಿಧಾನ ಪರಿಚಯಿಸಿದ ನಂತರ ತುಮಕೂರು ಜಿಲ್ಲೆ ಹಲಸು ಜಾಗೃತಿ ವಿಚಾರದಲ್ಲಿ ಮತ್ತೆ ರಾಜ್ಯದ ಗಮನ ಸೆಳೆದಿದೆ.
ಹಲಸು ಬೆಳೆಗಾರರ ಸಂಘಗಳು, ಅಕಾಲ ಹಲಸು ತಳಿ ಉಳಿಸುವ ಪ್ರಯತ್ನ, ಚಂದ್ರಬಕ್ಕೆ ಕಾಪಾಡಿ ಆಂದೋಲನ, ಹಲಸಿನ ತೊಳೆಯನ್ನು ದೀರ್ಘಾವಧಿಗೆ ಉಳಿಸಿಕೊಳ್ಳುವ ಸುಲಭ ವಿಧಾನದ ಆವಿಷ್ಕಾರ, ಸುಲಭವಾಗಿ ಹಲಸು ಹೆಚ್ಚುವ ವಿಶಿಷ್ಟ ಕತ್ತಿ ರೂಪುಗೊಂಡಿದ್ದು ಇದರಲ್ಲಿ ಪ್ರಮುಖ. ಅಚ್ಚರಿಯ ಸಂಗತಿ ಎಂದರೆ ಈ ಎಲ್ಲ ಆವಿಷ್ಕಾರಗಳ ಹಿಂದಿರುವುದು ‘ಸಾಮಾನ್ಯ’ ರೈತರಲ್ಲಿರುವ ಸಂಶೋಧಕನ ಮನಸ್ಸು.
ದಿಕ್ಕು ಬದಲಿಸಿದ ದಿನ
ತುಮಕೂರು ಸಮೀಪದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ನಡೆದ ಹಲಸು ಮೇಳದಲ್ಲಿ ತೋವಿನಕೆರೆಯ ಗೃಹಿಣಿ ಜಿ.ಎಲ್.ಸುನೀತಾ ತಂದಿದ್ದ ಹಲಸು ಶ್ಯಾವಿಗೆ ಪ್ರಮುಖ ಆಕರ್ಷಣೆಯಾಗಿತ್ತು. ‘ಹಲಸು ಶ್ಯಾವಿಗೆಯನ್ನು ಗಸಗಸೆ ಹಾಲಿನೊಂದಿಗೆ ಅಥವಾ ಒಗ್ಗರಣೆ ಹಾಕಿ ತಿನ್ನಬಹುದು. ಒಣಗಿಸಿಕೊಂಡರೆ ಬೇಕಾದಾಗ ಮತ್ತೆ ನೆನೆಸಿ ಬಳಸಬಹುದು. ಕರಿದು, ಉಪ್ಪು–ಮೆಣಸಿನಕಾಯಿಪುಡಿ ಉದುರಿಸಿದರೆ ಮಿಕ್ಸ್‌ಚರ್ ಆಗುತ್ತೆ’ ಎಂಬ ಸುನೀತಾ ಅವರ ಮಾತು ಮ್ಯಾಗಿಯೊಂದೇ ಶ್ಯಾವಿಗೆ ಎಂದುಕೊಂಡಿದ್ದ ಮಕ್ಕಳು–ಗೃಹಿಣಿಯರನ್ನು ಪಾರಂಪರಿಕ ಅಕ್ಕಿ–ರಾಗಿ ಶ್ಯಾವಿಗೆ ನೆನೆಸಿಕೊಳ್ಳುವಂತೆ ಮಾಡಿತು.
‘ಊರಲ್ಲಿ ಹಳ್ಳಿಸಿರಿ ಮಹಿಳಾ ಸಂಘ ಇದೆ. ನಾವು ಹಲಸಿನಿಂದ 50ಕ್ಕೂ ಹೆಚ್ಚು ಬಗೆಯ ತಿನಿಸು ತಯಾರಿಸುತ್ತೇವೆ. ನಮ್ಮ ಮೀಟಿಂಗ್‌ನಲ್ಲಿ ಒಮ್ಮೆ ಮ್ಯಾಗಿ ಗಲಾಟೆ ವಿಷಯ ಚರ್ಚಿಸುವಾಗ ಹಲಸು ಶ್ಯಾವಿಗೆ ತಯಾರಿ ಪ್ರಯತ್ನ ಏಕೆ ಮಾಡಬಾರದು? ಎಂಬ ವಿಷಯ ಪ್ರಸ್ತಾಪವಾಯಿತು. ಗೆಳತಿಯರೆಲ್ಲಾ ನನಗೇ ಅದರ ಹೊಣೆ ಒಪ್ಪಿಸಿ ಹಲಸು ಕಾಯಿ ಕೊಡಿಸಿದರು. ಹಲವು ಬಾರಿ ಪ್ರಯತ್ನಿಸಿದ ನಂತರ ಪಾಕವಿಧಾನ ಸಿದ್ಧವಾಯಿತು’ ಎಂದು ಸುನೀತಾ ನೆನಪಿಸಿಕೊಂಡರು.
‘ಚೆನ್ನಾಗಿ ಹಣ್ಣಾದ ಹಲಸು ತೊಳೆ ಹಾಕಿ ಒಮ್ಮೆ, ಕೆತ್ತೆ ಕಾಯಿ ಹಾಕಿ ಒಮ್ಮೆ, ನೆನೆಸಿದ ಅಕ್ಕಿಗೆ ನೀರು ಬೆರೆಸಿ ಒಮ್ಮೆ, ನೀರು ಬಸಿದು ಒಮ್ಮೆ; ಹೀಗೆ ಹಲವು ಬಾರಿ ಪ್ರಯತ್ನಿಸಿದ ನಂತರ ಶ್ಯಾವಿಗೆ ಸೂತ್ರ ಅಂತಿಮಗೊಂಡಿತು. ಎಲ್ಲ ಗೆಳತಿಯರೂ ರುಚಿ ನೋಡಿ ಭೇಷ್ ಎಂದರು’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು. ಈ ಬೆಳವಣಿಗೆಯು ಇದೀಗ ತುಮಕೂರು ಮತ್ತು ಕೊರಟಗೆರೆ ತಾಲ್ಲೂಕುಗಳ ಅಡುಗೆ ಮನೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಗೃಹಿಣಿಯರು ಹಲಸಿನ ಶ್ಯಾವಿಗೆ ಪ್ರಯೋಗ ನಡೆಸುತ್ತಿದ್ದಾರೆ.
ಯಾವಾಗ್‌ ಬೇಕ್– ಎಷ್ಟ್‌ ಬೇಕ್
‘ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ’ ಎಂಬ ಕೊರಗು ಹಲವು ರೈತರಲ್ಲಿದೆ. ಇಂಥವರ ಮಧ್ಯೆ ಸಂಘಟಿತರಾಗಿ ಪ್ರಯತ್ನಿಸಿ ರಾಜ್ಯವ್ಯಾಪಿ ಮಾರುಕಟ್ಟೆ ಕಂಡುಕೊಂಡ ರೈತರ ಪ್ರಯತ್ನ ಗಮನ ಸೆಳೆಯುತ್ತದೆ. ತೋವಿನಕೆರೆಯ ‘ಶ್ರಮಿಕಸಿರಿ ಹಲಸು ಬೆಳೆಗಾರರ ಸಂಘ’ದ ಸದಸ್ಯರು ಈ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಸಾಮಾನ್ಯವಾಗಿ ಮಾರ್ಚ್‌ನಿಂದ ಜುಲೈವರೆಗೆ ಮಾತ್ರ ರಾಜ್ಯದಲ್ಲಿ ಹಲಸು ಕಂಡು ಬರುತ್ತದೆ. ಆದರೆ ಕೊರಟಗೆರೆ ತಾಲ್ಲೂಕಿನ ಕೆಲವು ಮರಗಳು ಮಾತ್ರ ಅಕಾಲ ಹಲಸು ನೀಡುವ ವಿಶಿಷ್ಟ ಸಾಮರ್ಥ್ಯ ಪಡೆದಿವೆ. ಇಷ್ಟು ದಿನ ಇದು ರೈತರಿಗೆ ತೀರಾ ಸಹಜ ಎನಿಸಿತ್ತು. ಹಲಸು ಜಾಗೃತಿಗಾಗಿ ಶ್ರಮಿಸುತ್ತಿರುವ ಶ್ರೀಪಡ್ರೆ ಮತ್ತು ಬೆಂಗಳೂರು ಕೃಷಿ ವಿ.ವಿ. ವಿಜ್ಞಾನಿಗಳು ಈ ಕುರಿತು ಜಾಗೃತಿ ಮೂಡಿಸಿದ ನಂತರ ಹಲವರಿಗೆ ಆದಾಯದ ಮೂಲವಾಯಿತು. ರಾಜ್ಯದ ಯಾವುದೇ ಮೂಲೆಯಿಂದ, ಯಾವುದೇ ಕಾಲದಲ್ಲಿ ತೋವಿನಕೆರೆಯ ಶ್ರಮಿಕಸಿರಿ ಸಂಘವನ್ನು ಸಂಪರ್ಕಿಸಿ ಹಲಸಿಗೆ ಬೇಡಿಕೆ ಇಟ್ಟರೆ ಸಾಕು, ಬೇಡಿಕೆ ಬಂದ ಊರಿಗೆ ಅಗತ್ಯ ಪ್ರಮಾಣದ ಹಲಸನ್ನು ಸಂಘ ರವಾನಿಸುತ್ತದೆ.
‘ಕಳೆದ ವರ್ಷ ಕಾಲವಲ್ಲದ ಕಾಲದಲ್ಲಿ ಸಾಗರದ ಸಿಹಿ ತಿಂಡಿ ತಯಾರಕರೊಬ್ಬರು ಹಲ್ವಾ ಮಾಡೋಕೆ ಅಂತ ಹಣ್ಣಾದ ಹಲಸು ಬೇಕು ಅಂದ್ರು. ನಮ್ಮ ಸದಸ್ಯರ ಮರಗಳನ್ನು ಹುಡುಕಾಡಿ ಬಸ್‌ನಲ್ಲಿ ಹಣ್ಣು ಕಳಿಸಿಕೊಟ್ಟೆವು. ಅದೇ ಥರ ಪುತ್ತೂರಿನಲ್ಲಿ ನಡೆದ ಕೃಷಿ ಯಂತ್ರ ಮೇಳದಲ್ಲೂ ಸಿಹಿ ತಿಂಡಿ ಸ್ಟಾಲ್‌ಗೆ ನಾವೇ ಹಣ್ಣು ರವಾನಿಸಿದೆವು. ಬೆಂಗಳೂರಿನಲ್ಲಿ ನಡೆದ ಶ್ರೀಮಂತರೊಬ್ಬರ ಮದುವೆಗೆ ಲೋಡ್ ಕೆತ್ತೆಕಾಯಿ ಕಳುಹಿಸಿಕೊಟ್ಟಿದ್ದೆವು’ ಎಂದು ಸಂಘದ ಕಾರ್ಯದರ್ಶಿ ಸೋಮಶೇಖರ್ ನೆನಪಿಸಿಕೊಂಡರು.
ಮರ ಮಾಹಿತಿ
ರುಚಿ, ಪರಿಮಳ, ಅಂಟು, ತೊಳೆಯ ಗಾತ್ರ, ಹಣ್ಣಿನ ಗಾತ್ರ ಮತ್ತು ಆಕಾರದ ವಿಚಾರದಲ್ಲಿ ಹಲಸಿನ ವೈವಿಧ್ಯತೆ ಅಗಾಧ. ಒಂದೇ ಊರಿನಲ್ಲಿ ಬೆಳೆಯುವ ಹಲಸು ಒಂದೇ ರುಚಿ ಹೊಂದಿರುವುದಿಲ್ಲ; ಒಂದೇ ಮರದಲ್ಲಿ ಬಿಟ್ಟ ಎರಡು ಹಣ್ಣೂ ಒಂದೇ ರುಚಿ ಹೊಂದಿರುವುದಿಲ್ಲ. ಬೀಜ ನೆಟ್ಟು ಗಿಡ ಬೆಳೆಸಿದರೆ ತಾಯಿ ಗಿಡದ ಗುಣಗಳು ಸಂಪೂರ್ಣವಾಗಿ ಹೊಸ ಗಿಡಕ್ಕೆ ವರ್ಗಾವಣೆಯಾಗುವ ಯಾವ ಖಾತ್ರಿಯೂ ಇಲ್ಲ. ಮಾವು ತಳಿ ಸಂಶೋಧನೆ ಮತ್ತು ಸಂವರ್ಧನೆಗೆ ಗಮನ ಕೊಟ್ಟಷ್ಟು ನಮ್ಮ ವಿಜ್ಞಾನಿಗಳು ಹಲಸು ತಳಿ ರೂಪಿಸಲು ಗಮನ ಕೊಡಲಿಲ್ಲ.
ಈ ಕೊರತೆಯನ್ನು ಸವಾಲಾಗಿ ಸ್ವೀಕರಿಸಿದ ಕೆಲ ರೈತರು ‘ತಳಿ ಮಾಹಿತಿ ಕೋಶ’ ಸಿದ್ಧಪಡಿಸುವ ಮಹತ್ವಾಕಾಂಕ್ಷಿ ಪ್ರಯತ್ನ ಆರಂಭಿಸಿದರು. ಊರು, ಹಲಸಿನ ಗಾತ್ರ, ಬಣ್ಣ, ಪರಿಮಳ, ಹಣ್ಣು ಬಿಡುವ ಕಾಲದ ಪಟ್ಟಿ ಸಿದ್ಧಪಡಿಸಿಕೊಂಡರು. ಅತ್ಯುತ್ತಮ ಎನಿಸಿದ ಹಲಸು ಮರಗಳನ್ನು ಗುರುತಿಸಿ ಕೃಷಿ ವಿ.ವಿ. ವಿಜ್ಞಾನಿಗಳಿಗೆ ನೀಡಿದರು. ವಿ.ವಿ.ಯ ಸುಧಾರಿತ ಪ್ರಯೋಗಾಲಯದಲ್ಲಿ ಹಣ್ಣಿನ ಬಹುಮುಖಿ ಪರೀಕ್ಷೆ ನಡೆದು, ಕಸಿ ಮೂಲಕ ಅದರ ತಳಿ ಉಳಿಸುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿತು.
‘ಹಲಸು ತಳಿ ಪಟ್ಟಿ ಸಿದ್ಧಪಡಿಸುವ ಯೋಜನೆಯನ್ನು ಉತ್ಸಾಹದಿಂದ ಆರಂಭಿಸಿದ್ದೇವೆ. ಬಿಳಿ ಹಾಳೆ ಮೇಲೆ ಬರೆದು ಇಟ್ಟಿದ್ದೇವೆ. ಅದನ್ನು ಕಂಪ್ಯೂಟರ್‌ಗೆ ಅಳವಡಿಸಲು ತಜ್ಞರ ನೆರವು ಬೇಕಿದೆ’ ಎಂದು ತೋವಿನಕೆರೆ ಗ್ರಾಮದಲ್ಲಿ ತಳಿ ಮಾಹಿತಿ ಸಂಗ್ರಹಿಸಿದ ಎಚ್.ಜೆ.ಪದ್ಮರಾಜು ವಿವರಿಸಿದರು. ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯಲ್ಲಿ ಇಂಥದ್ದೇ ಪ್ರಯತ್ನವನ್ನು ನಿವೃತ್ತ ಕೃಷಿ ವಿಜ್ಞಾನಿ ಪರಮಶಿವಯ್ಯ ಮಾಡುತ್ತಿದ್ದಾರೆ.
ಹಲಸು ಸೀಳಲು ಕತ್ತಿ– ತೊಳೆ ಬೇಯಿಸಲು ಒಲೆ
ಗುಬ್ಬಿ ತಾಲ್ಲೂಕು ಅಮ್ಮನಘಟ್ಟ ಗ್ರಾಮದ ರೈತರಾದ ಶಂಕರಪ್ಪ ಹಲಸು ಸುಲಭವಾಗಿ ಕತ್ತರಿಸುವ ವಿಶಿಷ್ಟ ಕತ್ತಿ ರೂಪಿಸಿದ್ದಾರೆ. ಮೇವು ಕತ್ತರಿಸುವ ಕಟ್ಟರ್‌ ರೀತಿ ಇರುವ ಈ ಸಾಧನವನ್ನು ಒಂದು ಮರ ಅಥವಾ ಕಂಬದ ಆಸರೆ ನೀಡಿ, ಒತ್ತಿದರೆ ಸಾಕು, ಅಡಿಯಲ್ಲಿಟ್ಟಿರುವ ಹಲಸು ಎರಡು ಹೋಳಾಗುತ್ತದೆ. ಅದನ್ನು ಮತ್ತೆ ಎಷ್ಟು ಹೋಳಾಗಿ ಬೇಕಾದರೂ ಮಾಡಿಕೊಳ್ಳಬಹುದು. ಈ ವಿಧಾನದಲ್ಲಿ ಎಷ್ಟು ಹಲಸು ಕತ್ತರಿಸಿದರೂ ರಟ್ಟೆ ನೋವು ಬರುವುದಿಲ್ಲ. ತೊಳೆ ಬೇರ್ಪಡಿಸುವ ಕೆಲಸವನ್ನೂ ಇದು ಸುಲಭಗೊಳಿಸಿದೆ. 
ಸಂಶೋಧಕನ ಮನಸ್ಥಿತಿಯ ಶಂಕರಪ್ಪ 7 ತಟ್ಟೆಗಳಿರುವ ವಿಶಿಷ್ಟ ಡ್ರೈಯರ್ ಸಹ ರೂಪಿಸಿದ್ದಾರೆ. ಒಮ್ಮೆಗೆ 15 ಕೆ.ಜಿ.ಯಷ್ಟು ಹಲಸು ತೊಳೆಗಳನ್ನು ಇದರಲ್ಲಿ ಏಕಕಾಲಕ್ಕೆ ಒಣಗಿಸಬಹುದು. ಒಂದು ದಿನಕ್ಕೆ ಅತ್ಯಂತ ಸುಲಭವಾಗಿ 7 ರಿಂದ 8 ಕೆ.ಜಿ. ಒಣಗಿದ ಹಲಸು ಪಡೆಯುವ ಅವಕಾಶವನ್ನು ಇದು ಕಲ್ಪಿಸಿದೆ.
‘ಒಣಗಿದ ಹಲಸನ್ನು ಚೂರು ನೀರಲ್ಲಿ ನೆನೆಸಿಟ್ಟರೆ ದೋಸೆ ಮಾಡಬಹುದು. ಒಣ ತೊಳೆಗಳನ್ನು ಪುಡಿ ಮಾಡಿ ಪಾಯಸ, ಹೋಳಿಗೆ ತಯಾರಿಸಬಹುದು’ ಎನ್ನುವುದು ಅವರ ವಿವರಣೆ. ತುಮಕೂರು ಜಿಲ್ಲೆಯಲ್ಲಿ ಹಲಸು ತಳಿ ಸಂವರ್ಧನೆ ಮತ್ತು ಮೌಲ್ಯವರ್ಧನೆಯ ಹಲವು ಪ್ರಯತ್ನಗಳು ನಡೆಯುತ್ತಿವೆ. ಉದ್ಯಮಿಗಳು, ಸರ್ಕಾರದ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯ ಇತ್ತ ಗಮನ ಹರಿಸಬೇಕಿದೆ.
*
ಸರ್ವಋತು ಹಲಸು ಗ್ರಾಮ
ತುಮಕೂರು ಜಿಲ್ಲೆಯ ತೋವಿನಕೆರೆ ಗ್ರಾಮ ಸರ್ವಋತು ಹಲಸು ಮರಗಳಿಂದ ರಾಜ್ಯದ ಗಮನ ಸೆಳೆದಿದೆ. ರಾಜ್ಯ ಉಳಿದೆಡೆ ಇರುವ ಹಲಸು ಮರಗಳು ಕಾಯಿ ಬಿಡುವುದು ನಿಲ್ಲಿಸಿದ ನಂತರ ಇಲ್ಲಿನ ಕೆಲ ಮರಗಳು ಕಾಯಿ ಬಿಡಲು ಆರಂಭಿಸುತ್ತವೆ. ಊರಿಗೆ ಯಾರು– ಯಾವ ಕಾಲದಲ್ಲಿ ಬಂದರೂ ಹಲಸು ಲಭ್ಯ.
ರಾಜ್ಯಮಟ್ಟದ ಹಲಸು ಮೇಳ ನಡೆಯಬೇಕು
ಅಕಾಲ ಹಲಸು ತಳಿಯ ಮರಗಳಿಂದ ಜಗತ್ತಿನ ಗಮನ ಸೆಳೆದಿರುವ ತುಮಕೂರು ಜಿಲ್ಲೆಯಲ್ಲಿ ಪ್ರತಿವರ್ಷ ರಾಜ್ಯಮಟ್ಟದ ಹಲಸು ಮೇಳ ನಡೆಯಬೇಕು ಎನ್ನುತ್ತಾರೆ ಹಲಸು ಬೆಳೆ ಮತ್ತು ಹಲಸಿನಿಂದ ತಯಾರಾದ ಆಹಾರವನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಶ್ರೀಪಡ್ರೆ. ಜಿಲ್ಲೆಯಲ್ಲಿ ‘ಚಂದ್ರಬಕ್ಕೆ’ಯಂಥ ಹಲವು ವಿಶಿಷ್ಟ ತಳಿಗಳಿವೆ. ಅಂಥ ತಳಿಗಳ ಸಂವರ್ಧನೆ ಪ್ರಯತ್ನಗಳಾಗಬೇಕು. ರೈತರು ಪ್ರಯೋಗಾತ್ಮಕವಾಗಿ ಮಾಡಿರುವ ಪ್ರಯತ್ನಗಳಿಗೆ ಸಂಶೋಧನೆಯ ವಿಸ್ತರಣೆ ಬೇಕು.
ವಾಣಿಜ್ಯವಾಗಿಯೂ ಯಶಸ್ವಿಯಾಗಬಲ್ಲ ಸಿದ್ಧ ಆಹಾರ ಉತ್ಪನ್ನ ತಯಾರಿಕೆಗೆ ಉದ್ಯಮಿಗಳು ಮುಂದಾಗಬೇಕು ಎನ್ನುವುದು ಅವರ ಸಲಹೆ. ರೈತರ ಆರ್ಥಿಕತೆ ಸುಧಾರಿಸುವ ಹಲವು ಸಾಧ್ಯತೆಗಳನ್ನು ಹಲಸು ಹೊಂದಿದೆ. ಮಲೇಷಿಯಾದಲ್ಲಿ ಕೋಲ್ಡ್‌ಚೈನ್ ಮೂಲಕ 20 ದಿನ ತಾಜಾ ಹಲಸು ತೊಳೆ ಕಾಪಾಡುವ ತಂತ್ರಜ್ಞಾನ ಬಳಕೆಯಾಗುತ್ತಿದೆ. ಸ್ಥಳೀಯ ಉದ್ಯಮಿಗಳು ಮತ್ತು ಬೆಳೆಗಾರರ ಸಂಘಗಳು ಇಂಥ ಅವಕಾಶಗಳತ್ತ ಗಮನ ಹರಿಸಬೇಕು.
ಬೆಂಗಳೂರು ಎಂಬ ಬೃಹತ್ ಮಾರುಕಟ್ಟೆಯನ್ನು ತಮ್ಮ ಆರ್ಥಿಕತೆಗೆ ಪೂರಕವಾಗಿ ಬಳಸಿಕೊಳ್ಳಬೇಕು ಎನ್ನುವುದು ಅವರ ಕಿವಿಮಾತು. ವಿಶ್ವ ಮಾರುಕಟ್ಟೆಯಲ್ಲಿ ಕೆಂಪು ತೊಳೆಗೆ ಇಂದಿಗೂ ಉತ್ತಮ ಬೇಡಿಕೆ ಇದೆ. ‘ಚಂದ್ರಬಕ್ಕೆ’ಯನ್ನು ಜಗತ್ತಿಗೆ ಪರಿಚಯಿಸಲು ಇದು ಸಕಾಲ. ಉದ್ಯಮಿಗಳು– ಸರ್ಕಾರ ಇತ್ತ ಗಮನ ಹರಿಸಬೇಕು ಎನ್ನುವುದು ಅವರ ಆಶಯ.
*
‘ನಿಮ್ಮ ಸಂಪತ್ತೇನೆಂಬುದು ನಿಮಗೇ ಅರ್ಥವಾಗಿಲ್ಲ’
ತುಮಕೂರು ಜಿಲ್ಲೆ ತೋವಿನಕೆರೆ ಗ್ರಾಮದ ಸುತ್ತಮುತ್ತಲು ಇರುವ ಅಕಾಲ ಹಲಸು (ಅನ್‌ಸೀಸನ್) ಮರಗಳ ಬಗ್ಗೆ ಕೇಳಿ ತಿಳಿದಿದ್ದ ವಿಯೆಟ್ನಾಂ ದೇಶದ ಸಸ್ಯಶಾಸ್ತ್ರಜ್ಞ ಮಾಯಿ ವ್ಯಾನ್ ಟ್ರೀಗೆ ಕುತೂಹಲ ಬೆಳೆದಿತ್ತು. ಕಳೆದ ವರ್ಷ (15/5/14) ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಹಲಸು ಮೇಳದಲ್ಲಿ ಪಾಲ್ಗೊಂಡಿದ್ದ ಅವರು ಅಲ್ಲಿಂದ ತೋವಿನಕೆರೆಯನ್ನು ಹುಡುಕಿ ಬಂದರು. ಕೆಲ ರೈತರು ಹಲಸಿನ ಬಗ್ಗೆ ತಾತ್ಸಾರದಿಂದ ಮಾತಾಡಿದ್ದು ಕೇಳಿ ಬೇಸರಗೊಂಡರು.
‘ಹಲಸಿನಮರ ಎಂದರೆ ಹಾಲು ಕೊಡುವ ಹಸುವಿದ್ದಂತೆ. ನೀವು ಹಸುವಿಗೆ ಎಷ್ಟು ಕಾಳಜಿ ಮಾಡುತ್ತೀರೋ ಮರಕ್ಕೂ ಅಷ್ಟೇ ಕಾಳಜಿ ಮಾಡಬೇಕು. ಬುಡದಲ್ಲಿ ತೇವ ಕಾಪಾಡಿ, ವರ್ಷಕ್ಕೆ ಕನಿಷ್ಠ 6 ಕೆ.ಜಿ.ಕೊಟ್ಟಿಗೆ ಗೊಬ್ಬರ ಕೊಡಿ. ಇಂಥ ಹಲಸು ಮರಗಳು ಬೇರೆಲ್ಲೂ ಇಲ್ಲ. ನೀವು ನಿಜವಾದ ಅರ್ಥದಲ್ಲಿ ಶ್ರೀಮಂತರು. ಏನು ಮಾಡೋಣ ನಿಮ್ಮ ಸಂಪತ್ತು ಏನೆಂಬುದೇ ನಿಮಗೆ ಅರ್ಥವಾಗಿಲ್ಲ.
ಈ ತಳಿಗಳನ್ನು ಕಾಪಾಡದಿದ್ದರೆ ನಿಮ್ಮ ಊರಿಗೆ ಮಾತ್ರವಲ್ಲ; ಜಗತ್ತಿಗೇ ತುಂಬಲಾರದ ನಷ್ಟ’ ಎಂದು ರೈತರ ಹೆಗಲ ಮೇಲೆ ಕೈ ಇಟ್ಟು ಹೇಳಿದ್ದರು. ಚೀನಿ ಮುಖದವರೊಬ್ಬರು ತಮ್ಮ ಮನೆ ಬಾಗಿಲಿಗೆ ಬಂದು ಒಣ ಹಲಸು ತೊಳೆಯ ಪೊಟ್ಟಣ ಹಂಚಿ, ‘ನೀವು ಇಂಥದ್ದು ತಯಾರಿಸಿ ನಮ್ಮ ದೇಶಕ್ಕೆ ಕಳಿಸಬೇಕು. ನಾನು ಮತ್ತೆ ಬರ್ತೀನಿ’ ಎಂದು ಹೇಳಿದ್ದನ್ನು ಬಿಸಾಡಿಹಳ್ಳಿ, ಕಬ್ಬಿಗೆರೆ, ಸಿವಿಡಿ ಪಾಳ್ಯದ ರೈತರು ಇಂದಿಗೂ ನೆನೆಸುತ್ತಾರೆ.
*
ಹಲಸಿನ ಖಾದ್ಯಗಳು
ಬೇಕಾಗುವ ಸಾಮಗ್ರಿಗಳು: 250 ಗ್ರಾಂ ಅಕ್ಕಿ, ಚೆನ್ನಾಗಿ ಬಲಿತ ಹಲಸಿನಕಾಯಿ, 1 ಚಮಚ ಜೀರಿಗೆ, 1 ಚಮನ ಓಂಕಾಳು.
ವಿಧಾನ: ಅಕ್ಕಿಯನ್ನು 4 ಗಂಟೆ ನೀರಿನಲ್ಲಿ ನೆನೆಸಬೇಕು. ನೀರು ಬಸಿದು, ಹಲಸಿನ ತೊಳೆ ಸೇರಿಸಿ ನುಣ್ಣಗೆ ರುಬ್ಬಬೇಕು. ನುಣ್ಣಗಾದ ನಂತರ ಓಂಕಾಳು– ಜೀರಿಗೆ ಸೇರಿಸಿ ಗುಂಡಾಡಿಸಬೇಕು. ಮಿಶ್ರಣವನ್ನು ಹಬೆಯಲ್ಲಿ (ಇಡ್ಲಿ ಮಾದರಿ) ಬೇಯಿಸಿ, ಕೈಯಿಂದ ನಾದಿ (ಮಿದ್ದು) ಹದಕ್ಕೆ ತಂದು ಶ್ಯಾವಿಗೆ ಒರಳಲ್ಲಿ ಒತ್ತಿದರೆ ಎಳೆಎಳೆ ಶ್ಯಾವಿಗೆ ಸವಿಯಲು ಸಿದ್ಧ. ಬಿಸಿಯಿದ್ದಾಗಲೇ ಕಾಯಿ ಚಟ್ನಿ, ಕೆಂಪು ಚಟ್ನಿ, ನಿಂಬೆ ಒಗ್ಗರಣೆ, ಗಸಗಸೆ ಹಾಲು–ಪಾಯಸ, ಕಾಯಿ ಹೂರಣದೊಂದಿಗೆ ತಿನ್ನಬಹುದು. ಶ್ಯಾವಿಗೆಯನ್ನು ನೆರಳಿನಲ್ಲಿ ಒಣಗಿಸಿ ಎಣ್ಣೆಯಲ್ಲಿ ಕರಿದು ಉಪ್ಪು–ಮೆಣಸಿನಪುಡಿ ಉದುರಿಸಿಟ್ಟರೆ ಮಕ್ಕಳಿಗೆ ಸಂಜೆ ವೇಳೆ ಕೊಡುವ ಕುರುಕಲು ಆಗುತ್ತದೆ. ಬೇರೆ ಬೇರೆ ಗಾತ್ರದ ರಂಧ್ರವಿರುವ ಪ್ಲೇಟ್‌ಗಳನ್ನು ಬಳಸಿದರೆ ಇದೇ ಹಿಟ್ಟಿನಿಂದ ಕೋಡುಬಳೆ, ಚಕ್ಕುಲಿ, ಓಂಪುಡಿ, ಮಿಕ್ಸ್‌ಚರ್ ತಯಾರಿಸಬಹುದು.
ಮಾಹಿತಿಗೆ ಮೊ–9743777234.